ಮಂಗಳಾರತಿ ಸಮಯಕ್ಕೆ ಅಲುಗಾಡುವ ಹುತ್ತ! ಈ ಕ್ಷಣಕ್ಕಾಗಿ ಮುಗಿಬೀಳುವ ಭಕ್ತಸಾಗರ

Waves of Karnataka

ಮೂರು ಶತಮಾನದ ಹಿಂದೆ ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಉಣ್ಣಕ್ಕಿ ಹುತ್ತ ವೈಜ್ಞಾನಿಕ ಲೋಕಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಅಲುಗಾಡುವ ಹುತ್ತವನ್ನು ನೋಡುವುದೇ ಭಕ್ತರಿಗೆ ಒಂದು ವಿಶೇಷ ಅನುಭವವಾಗಿದೆ. ವಿಸ್ಮಯ ಸೃಷ್ಟಿ ಮಾಡಿರುವ ಹುತ್ತ ಉತ್ಸವದ ಸಂಜೆ ಮಹಾ ಮಂಗಳಾರತಿ ಸಮಯದಲ್ಲಿ ಅಲುಗಾಡಿ ಭಕ್ತರಲ್ಲಿ ಅಚ್ಚರಿ ಮೂಡಿಸುತ್ತದೆ
ಉಣ್ಣಕ್ಕಿ ಹುತ್ತ 10 ಅಡಿ ಎತ್ತರವಿದ್ದು ಇದು ಮಣ್ಣಿನಿಂದಲೇ ನಿರ್ಮಿತವಾಗಿದೆ. ಈ ಹುತ್ತಕ್ಕೆ ಜನರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುವ ಶಕ್ತಿ ಇದೆ ಎಂಬುದು ಭಕ್ತರ ಅಗಾಧ ನಂಬಿಕೆಯಾಗಿದೆ. ದನ ಕರುಗಳಿಗೆ ಹಾಗೂ ಮನುಷ್ಯರಿಗೆ ಕಾಯಿಲೆ ಬಂದರೆ ಹುತ್ತದ ಮಣ್ಣು ಹಚ್ಚಿದರೆ ಕಾಯಿಲೆ ನಿವಾರಣೆಯಾಗುತ್ತದೆ ಎಂಬುದು ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ. ಸ್ಥಳೀಯರು ಮಾತ್ರವಲ್ಲದೆ ಬೇರೆ ಊರುಗಳಿಂದಲೂ ಉತ್ಸವದಲ್ಲಿ ಭಾಗವಹಿಸುತ್ತಾರೆ. ಹಬ್ಬದ ಸಂಭ್ರಮದ ನಡುವೆ ಹಾಲು ಮತ್ತು ಅಕ್ಕಿ, ಪುರಿಯನ್ನು ಸಮರ್ಪಿಸುವುದು ವಾಡಿಕೆಯಲ್ಲಿದೆ ಎನ್ನುತ್ತಾರೆ ಭಕ್ತರಾದ ಬಗ್ಗಸಗೋಡು ಪ್ರತಾಪ್‌.
ದೀಪಾವಳಿಯ ನಂತರ ಬರುವ ಹುಣ್ಣಿಮೆಯ ಮೊದಲ ದಿನ ಈ ಹಬ್ಬ ಆಚರಿಸಲಾಗುತ್ತದೆ. ಇಲ್ಲಿ ಹಾಲು ಮತ್ತು ಅಕ್ಕಿ ಸೇರಿಸಿ ಹಾಲಕ್ಕಿ ವಿತರಿಸಲಾಗುತ್ತದೆ. ಈ ಹಾಲಕ್ಕಿಯನ್ನು ಭಕ್ತರು ತಮ್ಮ ಮನೆಯಲ್ಲಿ ಶುದ್ಧೀಕರಣಕ್ಕಾಗಿ ಗದ್ದೆ ತೋಟ ಹಾಗೂ ಮನೆಯ ಸಮೀಪ ಹಾಗೂ ಪಕ್ಷಿಗಳಿಗೆ ಹಾಕುವ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಉತ್ಸವಕ್ಕೆ ಬಾನಳ್ಳಿಯ ಸುತ್ತಮುತ್ತಲ ಹಳ್ಳಿಗಳ, ಗ್ರಾಮಗಳ ಜನರು ಈ ಉಣ್ಣಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 7 ಗಂಟೆಯ ನಂತರ ಮಹಾ ಮಂಗಳಾರತಿಯ ಸಮಯದಲ್ಲಿ ಹುತ್ತ ಅಲುಗಾಡುವುದನ್ನು ಕಣ್ತುಂಬಿಸಿಕೊಳ್ಳುತ್ತಾರೆ. ನಂತರ ಹುತ್ತದ ಸುತ್ತ ಕರುವೊಂದನ್ನು ಪ್ರದಕ್ಷಿಣೆ ಹಾಕಿ ಮಂಡಕ್ಕಿ ಎರಚಿ ಹರಕೆ ತೀರಿಸುವ ಪದ್ಧತಿ ಉತ್ಸವದಲ್ಲಿ ಕಂಡು ಬರುತ್ತದೆ. ನಂತರ ಮಂಡಕ್ಕಿಯನ್ನು ಪ್ರಸಾದ ವಿನಿಯೋಗ ಮಾಡಿದರೆ ನರಹುಣ್ಣು, ಕುರ, ಸರ್ಪ ಸುತ್ತು ಮುಂತಾದ ಕಾಯಿಲೆಗಳು ಗುಣವಾಗುತ್ತವೆ ಎನ್ನುತ್ತಾರೆ ಸ್ಥಳೀಯರು