ಭಾರತದಲ್ಲಿ ಒಂದು ದಶಕದಲ್ಲೇ ಬಡತನ ಪ್ರಮಾಣ 21.2%ರಿಂದ 8.5%ಕ್ಕೆ ಇಳಿಕೆ
July 03, 20240 minute read
ಭಾರತದಲ್ಲಿ ಕೆಲ ವರ್ಷಗಳಿಂದ ತಲಾದಾಯ ಜಾಸ್ತಿಯಾಗುತ್ತಿದ್ದು, ಜನ ಬಡತನದಿಂದ ಹೊರಬರುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತದಲ್ಲಿರುವ ಬಡತನ (Poverty In India) ಪ್ರಮಾಣದ ಕುರಿತು ಆರ್ಥಿಕ ಅಂಶಗಳ ಮೇಲೆ ಗಮನ ಇರಿಸುವ ಎನ್‌ಸಿಎಇಆರ್ ಸಂಸ್ಥೆಯು(NCAER Report) ನೂತನ ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತದ ಬಡತನ ಪ್ರಮಾಣವು ಒಂದು ದಶಕದಲ್ಲಿ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. 2011-12ನೇ ಸಾಲಿನಲ್ಲಿ ಭಾರತದ ಬಡತನ ಪ್ರಮಾಣವು ಶೇ.21.2ರಷ್ಟು ಇತ್ತು. ಈಗ ಅದು ಶೇ.8.5ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.
ಎನ್‌ಸಿಎಇಆರ್‌ನ ಸೊನಾಲ್ಡೆ ದೇಸಾಯಿ ಅವರು ಇಂಡಿಯಾ ಹ್ಯುಮನ್ ಡೆವಲೆಪ್‌ಮೆಂಟ್ ಸರ್ವೇ (IHDS) ಡೇಟಾವನ್ನು ಆಧರಿಸಿ ‘ಬದಲಾಗುತ್ತಿರುವ ಸಮಾಜದಲ್ಲಿ ಸಾಮಾಜಿಕ ಸುರಕ್ಷತಾ ಜಾಲಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ತಯಾರಿಸಿದ್ದು, ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. “ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ದೇಶದಲ್ಲಿ ಬಡತನದಿಂದ ಹೊರಬಂದಿರುವವರ ಸಂಖ್ಯೆ ಜಾಸ್ತಿ ಇದೆ” ಎಂಬುದಾಗಿ ವರದಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.