ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ? ಸಚಿವ ಎಂ.ಬಿ. ಪಾಟೀಲ್ ಸುಳಿವು

Waves of Karnataka


 ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ತಮಿಳುನಾಡು ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ (Bengaluru’s Second Airport) ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸ್ಥಳ ಹುಡುಕಾಟ ಚುರುಕುಗೊಳಿಸಿದೆ. ಈ ಸಂಬಂಧ ಸಚಿವ ಎಂ.ಬಿ.ಪಾಟೀಲ್‌ ಅವರು, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಸಭೆ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಪ್ರತಿಕ್ರಿಯಿಸಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಅವರು, ರಾಜ್ಯದ ರಾಜಧಾನಿಯ ಸಮೀಪ ಮತ್ತೊಂದು ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದನ್ನು ಎಲ್ಲಿ‌ ನಿರ್ಮಿಸಬೇಕು ಎನ್ನುವ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮತ್ತು ಮುಖ್ಯಮಂತ್ರಿಗಳ ಜತೆ ವಿಚಾರ ವಿನಿಮಯ ನಡೆಸಿ, ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಎರಡನೇ ಏರ್ಪೋರ್ಟ್ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಸಭೆ ನಡೆದಿದೆ. ಸದ್ಯಕ್ಕೆ ಬಿಐಎಎಲ್ ಜತೆ ಚಾಲ್ತಿಯಲ್ಲಿರುವ ಒಪ್ಪಂದದಲ್ಲಿ 2033ರವರೆಗೂ 150 ಕಿ.ಮೀ. ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಬಾರದು ಎಂಬ ಷರತ್ತಿದೆ. ಆದರೆ, ನಾವು ಈಗಿನಿಂದಲೇ ಕಾರ್ಯ ಪ್ರವೃತ್ತರಾದರೆ ಇನ್ನು ಎಂಟು ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂದರು.