ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ. ಈ ಪುಸ್ತಕದ ಪುಟಪುಟಗಳು ರಾಜ್ಯದ ಜನರಿಗೆ ತಿಳಿದಿದೆ. ಜನರ ವಿಶ್ವಾಸ ನನ್ನ ಮೇಲಿರುವವರೆಗೆ ವಿರೋಧಿಗಳ ಯಾವ ಷಡ್ಯಂತ್ರ, ಹೋರಾಟ, ಪಾದಯಾತ್ರೆಗಳು ನನ್ನನ್ನು ಒಂದಿಂಚು ಅಲುಗಾಡಿಸಲೂ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ ಮತ್ತು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರ ದುರುದ್ದೇಶದ ಪಾದಯಾತ್ರೆಯ ವಿರುದ್ಧವಾಗಿ ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಜನಾಂದೋಲನ ಸಭೆ ಅತ್ಯಂತ ಯಶಸ್ವಿಯಾಗಿದೆ. ಸತ್ಯ, ನ್ಯಾಯ, ಪ್ರಾಮಾಣಿಕತೆಗೆ ಸಹೃದಯಿ ಕನ್ನಡಿಗರು ಸದಾ ಜೊತೆ ನಿಲ್ಲುತ್ತಾರೆ ಎಂಬುದಕ್ಕೆ ಇಂದು ಸೇರಿದ್ದ ಲಕ್ಷಾಂತರ ಜನರು ಸಾಕ್ಷಿಯಾದರು.