ಬೆಂಗಳೂರಿನಲ್ಲಿ ಇಂದು ಸಹ ಧಾರಾಕಾರ ಮಳೆ: ರಾಮಕೃಷ್ಣನಗರದಲ್ಲಿ 100 ಮನೆ ಜಲಾವೃತ

Waves of Karnataka


 ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಇಂದು ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರು ದಕ್ಷಿಣ ಸಮೀಪದ ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಫಯಾಜಾಬಾದ್‌ನಲ್ಲಿ ಸುಮಾರು 100 ಮನೆಗಳು ಜಲಾವೃತವಾಗಿವೆ.

ಮಳೆಯಿಂದಾಗಿ ಚರಂಡಿಯ ಗಲೀಜು ನೀರು ಮನೆಗಳಿಗೆ ನುಗ್ಗಿ ಜೀವನ ದುಸ್ತರವಾಗಿದೆ. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಗೆ ಈ ಹಿಂದೆ ಹಲವು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ

ಬೆಂಗಳೂರು ದಕ್ಷಿಣದಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಭಾರೀ ಮಳೆಯಾಗಿದೆ. ಇದರ ಪರಿಣಾಮವಾಗಿ ರಸ್ತೆಗಳಲ್ಲಿ ನೀರು ತುಂಬಿ ಸುಮಾರು 100 ಮನೆಗಳಿಗೆ ನೀರು ನುಗ್ಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುಲಾಬ್ ಪಾಷಾ ಹೇಳಿದರು. 15 ರಿಂದ 20 ನಿಮಿಷಗಳ ಕಾಲ ಮಳೆಯಾದರೂ ಸಾಕು, ಇಡೀ ಪ್ರದೇಶವು ಜಲಾವೃತವಾಗುತ್ತದೆ. ಕಳೆದ 12 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿ ದುರ್ವಾಸನೆ ಬೀರುತ್ತಿದ್ದು, ಮಕ್ಕಳು ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದರು.