ಯಲಹಂಕ ವಲಯದಲ್ಲಿ ಮೇಘಸ್ಫೋಟ ಸಂಭವಿಸಿ ಭಾರೀ ಮಳೆಯಾಗುತ್ತಿರುವುದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರ ಆದೇಶದ ಮೇರೆಗೆ ಮಹಾನಗರ ಪಾಲಿಕೆಯ ಇತರ ವಲಯಗಳಿಂದ ಹೆಚ್ಚುವರಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ.
ಪ್ರತಿಯೊಬ್ಬ ಅಧಿಕಾರಿಗೂ ನಿರ್ದಿಷ್ಟ ಜವಾಬ್ದಾರಿ ವಹಿಸಿ ಸ್ಥಳೀಯ ನಿವಾಸಿಗಳಿಗೆ ಕೂಡಲೇ ಸ್ಪಂದಿಸಬೇಕು, ತುರ್ತಾಗಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಲಹಂಕ ವಲಯದಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 'ಅತಿವೃಷ್ಟಿಯಿಂದ ಜಲಾವೃತವಾಗಿರುವ ಪ್ರದೇಶಗಳಲ್ಲಿ ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅತ್ಯಂತ ಸಮಸ್ಯಾತ್ಮಕ ಪ್ರದೇಶಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಸ್ಪಂದಿಸಿ ಸಂತ್ರಸ್ತ ಪ್ರದೇಶಗಳ ನಿವಾಸಿಗಳಿಗೆ ಕುಡಿಯುವ ನೀರು, ಹಾಲು, ಬಿಸ್ಕೆಟ್, ಆಹಾರ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.