ಭಾರತಕ್ಕೆ 'ನಿಜವಾದ ಸ್ವಾತಂತ್ರ್ಯ' 1947 ರಲ್ಲಿ ಸಿಕ್ಕಿಲ್ಲ, ರಾಮ ಮಂದಿರ ಪ್ರತಿಷ್ಠಾಪನಾ ದಿನದಂದು ಸಿಕ್ಕಿತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮೋಹನ್ ಭಾಗವತ್ ಅವರ ಹೇಳಿಕೆ ಎಲ್ಲಾ ಭಾರತೀಯರಿಗೆ ಮಾಡಿದ ಅವಮಾನ ಎಂದು ಟೀಕಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮುಖ್ಯಸ್ಥರು ದೇಶದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕಾಂಗ್ರೆಸ್ ನ ನೂತನ ಪ್ರಧಾನ ಕಚೇರಿ, ಇಂದಿರಾ ಗಾಂಧಿ ಭವನ ಉದ್ಘಾಟನೆಯ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಜನರು ಅಂತಹ "ಅಸಂಬದ್ಧ" ಮಾತುಗಳನ್ನು ಕೇಳುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದರು.